ಮೆರುಗೆಣ್ಣೆಗಳು -
ಮೂಲತಃ ಅಲಂಕಾರಿಕ ಅಥವಾ ರಕ್ಷಕಲೇಪಗಳಿಗೆ ಬಳಸುವ ವಸ್ತುಗಳು (ಲ್ಯಾಕ್ವರ್ಸ್). ಇವುಗಳ ಸಂಯೋಜನೆ ವೈವಿಧ್ಯಮಯ. ಮೆರುಗೆಣ್ಣೆಯನ್ನು ಯಾವುದಾದರೂ ಪದಾರ್ಥಕ್ಕೆ ಹಚ್ಚಿದ ಕೂಡಲೇ ಅದರಲ್ಲಿದ್ದ ದ್ರಾವಕ ಆವಿಯಾಗಿ ಒಣಗುತ್ತದೆ. ಆಗ ಪದಾರ್ಥದ ಮೇಲ್ಮೈ ಹೊಳೆಯುತ್ತದೆ. ಉತ್ಕರ್ಷಣ, ಪಾಲಿಮರಿಕರಣ ಮತ್ತು ಇನ್ನಾವುದೇ ಬಗೆಯ ಆಣವಿಕ ಬದಲಾವಣೆಗಳೂ ಆಗುವುದಿಲ್ಲ. ಮೆರುಗನ್ನು ಹೊತ್ತ ವಾಹಕ ಅರ್ಥಾತ್ ದ್ರಾವಕ ಸಾಮಾನ್ಯವಾಗಿ ಒಂದು ನೈಟ್ರೊಸೆಲ್ಯುಲೋಸ್ ವ್ಯುತ್ಪನ್ನ. ಅದು ಸೆಲ್ಯುಲೋಸ್ ಅಸಿಟೇಟ್ ಅಥವಾ ಸೆಲ್ಯುಲೋಸ್ ಬ್ಯುಟಿರೇಟ್‍ನಂಥ ಎಸ್ಟರ್ ಇಲ್ಲವೇ ಈಥೈಲ್ ಸೆಲ್ಯುಲೋಸ್‍ನಂಥ ಒಂದು ಈಥರ್ ಆಗಿರಬಹುದು.

ಕ್ರಿಸ್ತಶಕ ಪ್ರಾರಂಭವಾಗುವುದಕ್ಕೆ ಸ್ವಲ್ಪ ಮುಂಚೆ ಮೆರುಗೆಣ್ಣೆಗಳ ಬಳಕೆ ಪ್ರಾರಂಭವಾಯಿತೆಂದು ಪ್ರತೀತಿ. ಚೀನದಿಂದ ಜಪಾನಿಗೆ ಇದರ ಪ್ರವೇಶವಾದದ್ದು ಮೂರನೆಯ ಶತಮಾನದ ಅನಂತರವೆಂದು ನಂಬಲಾಗಿದೆ. ಚೀಣಿ ಮತ್ತು ಜಪಾನಿ ಮೆರುಗೆಣ್ಣೆಗಳು ಸಸ್ಯರಸಜನ್ಯಗಳು. ಈ ಸಸ್ಯರಸಗಳ ನಿಷ್ಕøಷ್ಟ ಸಂಯೋಜನೆ ತಿಳಿಯದು. ಆದರೆ ಅವು ಫೀನಾಲಿಕ್ ಸಂಯಕ್ತಗಳು. ಪ್ರೋಟೀನುಗಳು, ಅಂಟು ನೀರು ಮತ್ತು ಬಾಷ್ಪಶೀಲ ಆಮ್ಲಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. ಈ ಪ್ರೋಟೀನಿನಲ್ಲಿ ಒಂದು ಕಿಣ್ವವಿದೆ. ಕಚ್ಚಾ ಮೆರುಗೆಣ್ಣೆಯ ಅತಿತೆಳು ಪದರವನ್ನು ಸಾಮಾನ್ಯ ಉಷ್ಣತೆಯಲ್ಲಿ ತೇವಭರಿತ ವಾಯುವಿಗೆ ಒಡ್ಡಿದಾಗ ಅದು ನಿಧಾನವಾಗಿ ಗಡಸಾಗುತ್ತದೆ. ಕ್ರಿಯಾವರ್ಧಕ ಕಿಣ್ವದ ಷಟ್ಮುಖದಲ್ಲಿ ಅದು ಉತ್ಕರ್ಷಣ ಹೊಂದುವುದರಿಂದ ಪದರಕ್ಕೆ ಗಡಸುತನ ಒದಗುವುದು.

ಭಾರತದಲ್ಲಿ ದೊರೆಯುವ ಆರಗು ಪ್ರಾಚ್ಯ ಮೆರುಗಿನ ಒಂದು ರೂಪ, ಒಂದು ಬಗೆಯ ಕೀಟಗಳು ಇದನ್ನು ಉತ್ಪತ್ತಿಮಾಡುತ್ತವೆ. ಮರದ ಜೀವರಸ ಕೀಟದ ದೇಹದಲ್ಲಿ ಪರಿವರ್ತನೆ ಹೊಂದಿ ಅಂಟುವಸ್ತುವಿನ ರೂಪದಲ್ಲಿ ಮರದ ರೆಂಬೆಗಳ ಮೇಲೆ ನಿಕ್ಷೇಪಿಸಲ್ಪಡುತ್ತದೆ. ಸ್ವಯಂ ಕೀಟವೇ ಅದರಲ್ಲಿ ಹೊತುಹೋಗಿರುವುದು. ಅಂಟಿನ ಪ್ರಧಾನ ಅಂಶ ಅಗ್ರ್ಯಾನಿಕ್ ಆಮ್ಲಗಳಾಗಿದ್ದರೂ ಅದರಲ್ಲಿ ನೀರಿನಲ್ಲಿ ದ್ರಾವ್ಯವಾದ ರಂಗು, ಸಕ್ಕರೆ, ಪ್ರೋಟೀನ್ ಮತ್ತು ಮೇಣಗಳು ಕೂಡ ಇರುವುವು. 

ಉತ್ತಮ ದರ್ಜೆಯ ಪ್ರಾಚ್ಯ ಮೆರುಗೆಣ್ಣೆ ಕೃತಿಗಳನ್ನು ಪರಿಶೀಲಿಸಿದರೆ ಯುಕ್ತ ಹಿನ್ನೆಲೆಯ ಮೇಲೆ ಬಗೆಬಗೆಯ ಬಣ್ಣಗಳನ್ನು ಹಚ್ಚಿ ಅದರ ಮೇಲೆ ಹಲವು ಪದರ ನಿರ್ವರ್ಣ ಮೆರುಗೆಣ್ಣೆಯನ್ನು ಬಳಿದು ರಕ್ಷಿಸಿಕೊಂಡು ಬಂದಿರುವಂತೆ ಕಾಣುತ್ತದೆ. ಇಂಥ ಕೆಲವು ಅಮೂಲ್ಯ ಪ್ರಾಚೀನಕೃತಿಗಳ ನುಣುಪಾದ ಮೇಲ್ಮೈ ವರ್ಣ ದ್ರವ್ಯಗಳನ್ನು ಸಮನಾಗಿ ನಿಲಂಬಿಸಿರುವ ಜಾಣ್ಮೆ ಮತ್ತು ಮೆರುಗೆಣ್ಣೆಗಳನ್ನು ತಿಕ್ಕಿ ನೀಡಿರುವ ಹೊಳಪು ಇವನ್ನು ನೋಡಿದರೆ ಅದಕ್ಕಾಗಿ ಕಲಾವಿದ ವಹಿಸಿದ ಆಸ್ಥೆ ಮತ್ತು ಶ್ರಮಗಳ ಅರಿವಾದೀತು ಆದ್ದರಿಂದಲೇ ಈ ಕಲಾಕೃತಿಗಳ ಬೆಲೆಯೂ ಅಪ್ಟೇ ದುಬಾರಿ.

ಇಂದಿನ ಮೆರುಗೆಣ್ಣೆಗಳು ಪ್ರಾಚ್ಯ ಮೆರುಗೆಣ್ಣೆಗಳಿಗಿಂತ ರಾಸಾಯನಿಕವಾಗಿ ಭಿನ್ನ ಒಣಗುವುದರಲ್ಲಿ ಮತ್ತು ಮೆರುಗು ಪದರದ ಅಂತಿಮ ಗಡಸುತನದಲ್ಲಿ ಮಾತ್ರ ಅವು ಹೋಲುತ್ತವೆ. ಅತಿಸ್ನಿಗ್ಧ ನೈಟ್ರೊಸೆಲ್ಯುಲೋಸ್ ಲೇಪಗಳ ಆಗಮನ 19ನೆಯ ಶತಮಾನದ ಉತ್ತರಾರ್ಧದಲ್ಲಿ ಆಯಿತು. ಅಲ್ಲಿಯ ತನಕ ಜನಸಾಮಾನ್ಯಕ್ಕೆ ಇವುಗಳ ಪರಿಚಯವೇ ಇರಲಿಲ್ಲ. ಅನಂತರ ಅಲ್ಪಸ್ನಿಗ್ಧ ನೈಟ್ರೋಸೆಲ್ಯುಲೋಸ್ ಬಳಕೆಗೆ ಬಂತು. ಇದರಿಂದ ಕ್ಷಿಪ್ರವಾಗಿ ಒಣಗುವ ಲೇಪಗಳು ದಕ್ಕಿದಂತಾಗಿ ಪೆಯಿಂಟ್ ಕೈಗಾರಿಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದುವು. ಇವುಗಳ ಸಂಯೋಜನೆ ಸರಳವಾಗಿತ್ತು. ನೈಟ್ರೊಸೆಲ್ಯುಲೋಸ್‍ನೊಂದಿಗೆ ಎಸ್ಟರ್‍ಗೋಂದು, ಡಾಮರ್ ಗೋಂದು ಅಥವಾ ರೊಸನ್ ಮ್ಯಾಲಿಯೇಟ್‍ನಂಥ ಒಂದು ಅಂಟು ಮತ್ತು ರಾಸಾಯನಿಕ ಪ್ಲ್ಯಾಸ್ಟಿಸೈಸರ್‍ಗಳನ್ನು ಬೆರೆಸಿ ಇವನ್ನು ತಯಾರಿಸುತ್ತಿದ್ದರು.  ಮೆತುಲೇಪಗಳಲ್ಲಿ ಕಚ್ಚಾ ಹರಳೆಣ್ಣೆಯನ್ನು ಪ್ಲ್ಯಾಸ್ಟಿಸೈಸರ್ ಆಗಿ ಬಳಸುವುದು ವಾಡಿಕೆಯಾಗಿತ್ತು.
1930ರ ಸುಮಾರಿಗೆ ಮೆರುಗೆಣ್ಣೆಗಳ ಸಂಯೋಜನೆಯಲ್ಲಿ ಮತ್ತೊಂದು ಸುಧಾರಣೆಯಾಯಿತು. ನೈಟ್ರೊಸೆಲ್ಯುಲೋಸಿನೊಡನೆ ಆಲ್ಕಿಡ್ ಅಂಟುಗಳು ಸಂಯೋಜಿಲ್ಪಟ್ಟವು. ಇದರಿಂದ ಮೆರುಗು ಪದರದ ಗುಣ ಮತ್ತು ಬಾಳಿಕೆ ಹೆಚ್ಚಿತು. ಇಂದೂ ಅವು ಬಳಕೆಯಲ್ಲಿರುವುದು ಈ ಕಾರಣದಿಂದಲೇ, ಇದೇ ಸಮಯಕ್ಕೆ ಸಂಶ್ಲೇಷಿತ ಪಾಲಿಮರುಗಳನ್ನು ಒಳಗೊಂಡ ಮೆರುಗೆಣ್ಣೆಗಳು ತಲೆ ಎತ್ತಿದುವು. ಇವುಗಳ ಪೂರ್ಣ ಪಟ್ಟಿ ಕೊಡುವುದು ವ್ಯಾವಹಾರಿಕವಲ್ಲ. ಆದರೂ ಇವುಗಳಲ್ಲಿ ಮುಖ್ಯವೆನಿಸಿದ ವೀನೈಲ್ ಅಂಟುಗಳು, ಪಾಲಿಸ್ಟೈರೀನ್ ಬ್ಯೂಟಡಯೀನ್ ಅಂಟುಗಳು, ಕ್ಲೋರಿನೀಕರಿಸಿದ ರಬ್ಬರ್ ಮೊದಲಾದವನ್ನು ಹೆಸರಿಸಬಹುದು.
ಇಂದಿಗೂ ನೈಟ್ರೊಸೆಲ್ಯುಲೋಸ್ ಮೆರುಗಣ್ಣೆಯ ಅತಿಮುಖ್ಯ ಘಟಕ ಎನಿಸಿ ಕೊಂಡಿದೆ. ಹತ್ತಿ ಅಥವಾ ಮರದ ಪಲ್ಪ್‍ನಿಂದ ಪಡೆದ ಸೆಲ್ಯುಲೋಸನ್ನು ನೈಟ್ರೀಕರಿಸಿ ಇದನ್ನು ತಯಾರಿಸುತ್ತಾರೆ. ವಾಣಿಜ್ಯದರ್ಜೆಯ ಉತ್ಪನ್ನದಲ್ಲಿ 11-13.5%   ನೈಟ್ರೊಜನ್ ಇರುತ್ತದೆ. ಇದರ ದ್ರಾವಕಗುಣದ ವ್ಯಾಪ್ತಿ ವಿಶಾಲ, ನಾನಾಬಗೆಯ ಎಸ್ಟರುಗಳು ಆಲ್ಕೊಹಾಲ್‍ಗಳು, ಕೀಟೋನುಗಳು, ಅಂಟುಗಳು ಮತ್ತು ಪ್ಲ್ಯಾಸ್ಟಿಸೈಸರ್‍ಗಳನ್ನು ಅನನ್ಯವಾಗಿ ಧರಿಸಬಲ್ಲದು. ವಿವಿಧ ಸ್ನಿಗ್ಧತೆಯು ಮೆರುಗಣ್ಣೆಯನ್ನು ಮಾಡಿಕೊಳ್ಳಬಲ್ಲ ಇದೊಂದು ಅನುಕೂಲ.
 
ಆಧುನಿಕ ನೈಟ್ರೊಸೆಲ್ಯುಲೋಸ್ ಮೆರುಗಣ್ಣೆಗಳನ್ನು ಯಾವ ಪದಾರ್ಥದ ಮೇಲಾದರೂ ಅದು ಲೋಹ ಮರ, ಕಾಗದ ನೂಲು ಏನಾಗಿದ್ದರೂ ಸರಿಯೇ-ಲೇಪಿಸಬಹುದು. ಇವುಗಳಿಂದ ಪೀಠೋಪಕರಣಗಳಿಗೆ ಮತ್ತು ಮೋಟರ್ ವಾಹನದ ಭಾಗಗಳಿಗೆ ನಿರ್ವರ್ಣ ಅಥವಾ ವರ್ಣಯುಕ್ತ ಲೇಪನಗಳನ್ನು ನೀಡಬಹುದಾಗಿದೆ. ಕಾಗದ ಕೈಗಾರಿಕೆಯಲ್ಲೂ ಇದರ ಬಳಕೆ ಸಾಮಾನ್ಯ. ಉದಾಹರಣೆಗೆ ಗುರುತುಚೀಟಿಗಳು, ಸೆಲ್ಲೊಫೇನ್ ಪುಸ್ತಕಗಳ ರಟ್ಟುಗಳು, ಬಣ್ಣದ ಕಾರ್ಡುಗಳು ಮತ್ತು ಪೊಟ್ಟಣಗಳ ತಯಾರಿಕೆಗೆ ಇವು ಉಪಯುಕ್ತ. ಪೀಠೋಪಕರಣಗಳಿಗೆ ಹಚ್ಚುವ ಆಧುನಿಕ ಮೆರುಗೆಣ್ಣೆಗಳಲ್ಲಿ ನೈಟ್ರೊಸೆಲ್ಯುಲೋಸ್ ಜೊತೆ ಒಂದು ರಾಸಾಯನಿಕ ಪ್ಲಾಂಸೈಸರ್ ಒಣಗದ ಆಲ್ಕಿಡ್ ಅಂಟು ಮತ್ತು ಲಾರಿಕ್ ಆಮ್ಲಗಳಿರುತ್ತವೆ. ಇದರಿಂದ ನಸುಹೊಂಬಣ್ಣದ ಪೀಠೋಪಕರಣಗಳ ಮೇಲಿನ ಹೊಳಪು ಬಲುಕಾಲ ಉಳಿಯುತ್ತದೆ. ಒಣಗದ ಆಲ್ಕಿಡ್ ಮರವನ್ನು ಶೀತಹವೆಯಿಮದ ರಕ್ಷಿಸುತ್ತದೆ. ಮೋಟರ್ ವಾಹನಕ್ಕೆ ಲೇಪಿಸುವ ಮೆರುಗೆಣ್ಣೆಗಳಲ್ಲಿ ನೈಟ್ರೊಸೆಲ್ಯುಲೋಸಿನೊಡನೆ ಒಂದು ರಾಸಾಯನಿಕ ಪ್ಲಾಸ್ಟಿಸೈಸರ್, ತೆಂಗಿನ ಎಣ್ಣೆ ಮತ್ತು ಇದಕ್ಕೆ ಸಂಗತವಾಗುವ ಒಂದು ಆಲ್ಕಿಡ್ ಅಂಟುಗಳನ್ನು ಸೇರಿಸಿರುತ್ತಾರೆ. ಇತ್ತೀಚೆಗೆ ಕಾರುಗಳಿಗೆ ಹಚ್ಚಲು ಯುಕ್ತವಾದ ಮತ್ತು ಬಿಸಿಲಿನ ಹೊಡೆತವನ್ನು ಸಹಿಸಬಲ್ಲ ಬಗೆಬಗೆಯ ಬಣ್ಣಗಳು ಮಾರುಕಟ್ಟೆಯಲ್ಲಿ ಇರುವುದರಿಂದ ವಾಹನಗಳಿಗೆ ಬೇಕಾದ ಬಣ್ಣ ಮತ್ತು ಮೆರುಗನ್ನು ಕೊಡಬಹುದು. ಇವುಗಳಲ್ಲಿ ಟೈಟೇನಿಯಮ್ ಡೈಆಕ್ಸೈಡ್, ಇಂಡಾಂತ್ರಿನ್ ಮೆರೂನ್ ಮತ್ತು ನೀಲಿ, ಫ್ತ್ಯಾಲೊಸಯನೈನ್ ನೀಲಿ, ಹಸುರು ಮತ್ತು ಫೆರಿಕ್ ಹೈಡ್ರೇಟುಗಳ ಯುಕ್ತ ಸಂಯೋಜನೆಯಿಂದ ಮೋಟರ್ ವಾಹನಕ್ಕೆ ಹೊಳಪು ಕೊಡುವ ಆಧುನಿಕ ಬೆಡಗಿನ ಮೆರುಗೆಣ್ಣೆಗಳನ್ನು ತಯಾರಿಸುವರು.

ಈಥೈಲ್ ಸೆಲ್ಯುಲೋಸಿನ ಉಪಯೋಗ ಸೀಮಿತವಾದದ್ದು. ಸೆಲ್ಯುಲೋಸಿಗೆ ಸಾರಯುತ ಕಾಸ್ಟಿಕ್ ಸೋಡ ದ್ರಾವಣ ಮತ್ತು ಈಥೈಲ್ ಕ್ಲೊರೈಡುಗಳನ್ನು ಪ್ರಯೋಗಿಸಿ ಇದನ್ನು ತಯಾರಿಸಲಾಗುವುದು. ಉತ್ಪನ್ನದಲ್ಲಿ 43%-50% ಈಥಾಕ್ಸಿ ಅಂಶವಿರುತ್ತದೆ. ಆಲ್ಕೋಹಾಲುಗಳು ಮತ್ತು ಹೈಡ್ರೋಕಾರ್ಬನುಗಳಂಥ ಅಗ್ಗದ ದ್ರಾವಕಗಳಲ್ಲಿ ಇದು ದ್ರಾವ್ಯ, ಅಲ್ಲದೆ ಉಷ್ಣನಿರೋಧಕ ಕಾಗದ ಕೇಬಲ್ ನೂಲು ಮತ್ತು ಪ್ಲಾಸ್ಟಿಕುಗಳಿಗೆ ಲೇಪಿಸುವ ಮೆರುಗೆಣ್ಣೆಗಳಲ್ಲಿ ಬಳಸಲು ಪ್ರಶಸ್ತ.
ಸೆಲ್ಯುಲೋಸ್ ಆಸಿಟೇಟ್ ಮೆರುಗೆಣ್ಣೆಯ ಇನ್ನೊಂದು ವಿಶಿಷ್ಟ ಘಟಕ. ಸೆಲ್ಯುಲೋಸ್ ಅಸಿಟೇಟ್ ಬ್ಯುಟಿರೇಟಿನ ಅಧಿಕ ದ್ರಾವಕ ಸಾಮಥ್ರ್ಯ ಮತ್ತು ಪ್ಲಾಸ್ಟಿಸೈಸರ್ ಅಂಟು ಮತ್ತಿತ್ತರ ಘಟಕಗಳನ್ನು ತನ್ನಲ್ಲಿ ಅನನ್ಯವಾಗಿ ಧರಿಸುವುದು ಇದರ ವೈಶಿಷ್ಟ್ಯಗಳು. ಪ್ಲಾಸ್ಟಿಕ್ ನೂಲು ಮತ್ತು ಜಲ್ ಲೇಪಗಳಿಗೆ ಇದು ಹೇಳಿ ಮಾಡಿಸಿದಂಥ ಮೆರುಗೆಣ್ಣೆ.

ಸೆಲ್ಯುಲೋಸೇತರ ಮೆರುಗೆಣ್ಣೆಗಳಲ್ಲಿ ಪ್ರಾಯಶಃ ಅತಿ ಜನಪ್ರಿಯವಾದವೆಂದರೆ ವೀನೈಲ್ ಅಂಟುಗಳನ್ನು ಒಳಗೊಂಡಿರುವ ಪದಾರ್ಥಗಳು. ಇವುಗಳಲ್ಲಿ ವೀನೈಲ್ ಅಸಿಟೇಟ್, ವೀನೈಲ್ ಕ್ಲೋರೈಡ್ ಮತ್ತು ವಿನಿಲಿಡೀನ್ ಕ್ಲೋರೈಡ್ ಪುಂಜಗಳಿರುತ್ತವೆ. ಪರಿಣಾಮವಾಗಿ ಇವು ನೀರಿನಂತೆ ನಿರ್ವರ್ಣ, ರುಚಿರಹಿತ, ವಾಸನೆ ರಹಿತ, ರಾಸಾಯನಿಕ ನಿರೋಧಿ ಮತ್ತು ನಿರುಪದ್ರವಿ. ಲೋಹ ಲೇಪನಕ್ಕೆ ಸಹ ಪಾಲಿಮರ್ ವೀನೈಲ್ ಅಸಿಟೇಟ್ - ಕ್ಲೋರೈಡ್ ಅಂಟನ್ನು ಒಳಗೊಂಡಿರುವ ಮೆರುಗೆಣ್ಣೆಯುಕ್ತವಾದುದು. ಇದರ ಮೇಲೆ ಮ್ಯಾಲಿಯಿಕ್ ಅನ್‍ಹೈಡ್ರೈಡ್ ಪ್ರಯೋಗಿಸಿದರೆ ಉಂಟಾಗುವ ಅಂಟು, ಲೋಹದ ಮೇಲ್ಮೈಯನ್ನು ಇನ್ನೂ ಬಲವಾಗಿ ಕಚ್ಚಿಹಿಡಿಯುತ್ತದೆ. 

ಅಕ್ರಿಲಿಕ್ ಅಂಟುಗಳ ಬಳಕೆ ಅಷ್ಟಾಗಿಲ್ಲ. ಇವು ಅಕ್ರಿಲಿಕ್ ಮತ್ತು ಮೀಥಾಕ್ರಿಲಿಕ್ ಆಮ್ಲೀಯ ಎಸ್ಟರುಗಳ ಪಾಲಿಮರುಗಳು. ಇವುಗಳಿಗೆ ಹೆಚ್ಚು ಕಾಲ ಬಣ್ಣ ಉಳಿಸಿಕೊಳ್ಳುವ ಸಾಮಥ್ರ್ಯವಿದೆ.  ವರ್ಣ ಹಾಗೂ ವರ್ಣಯುಕ್ತ ಲೇಪಗಳಿಗೆ ಬಳಸಬಹುದು. ಅಕ್ರಿಲಿಕ್ ಅಂಟುಗಳುಳ್ಳ ಮೆರುಗೆಣ್ಣೆಗಳನ್ನು ಪಾಲಿಷ್ ಮಾಡಿದ ಕ್ರೋಮಿಯಮ್, ಹಿತ್ತಾಳೆ ಮತ್ತು ಅಲ್ಯೂಮಿನಿಯಮ್‍ಗಳಿಗೆ ಲೇಪಿಸುವುದು ವಾಡಿಕೆ.  

ಆಧುನಿಕ ಮೆರುಗೆಣ್ಣೆ ಉದ್ಯಮ ರಸಾಯನವಿಜ್ಞಾನ, ಭೌತವಿಜ್ಞಾನ ಮತ್ತು ಎಂಜಿನಿಯರಿಂಗುಗಳ ಸಂಗಮಕ್ಷೇತ್ರ.											                
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ